ಅಧಿಕಾರದರ್ಜೆ	

ಆಡಳಿತವ್ಯವಸ್ಥೆಯಲ್ಲಿ ಕೆಲಸಗಳು ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಅಧಿಕಾರದರ್ಜೆಯಲ್ಲಿ ಅನೇಕ ಶ್ರೇಣಿಗಳನ್ನು ನಿರ್ಮಿಸಿ, ಅದರಲ್ಲಿ ಮೇಲಿನಿಂದ ಕೆಳಕ್ಕೂ ಕೆಳಗಿನಿಂದ ಮೇಲಕ್ಕೂ ಅಧಿಕಾರ ಹರಿಯುವಂತೆ ಮಾಡುವ ಕ್ರಮಬದ್ಧವಾದ ವ್ಯವಸ್ಥೆ. ಈ ಅಧಿಕಾರದರ್ಜೆಯನ್ನು (ಹೈರಾರ್ಕಿ) ಕೆಲವುಸಾರಿ ಪಿರಮಿಡ್ಡುಗಳಿಗೂ ಮತ್ತು ದೇವಸ್ಥಾನದ ಗೋಪುರಗಳಿಗೂ ಹೋಲಿಸಿದ್ದಾರೆ. ಪಿರಮಿಡ್ಡುಗಳು ಅಥವಾ ಗೋಪುರಗಳು ಯಾವ ರೀತಿ ಅಡಿಯಲ್ಲಿ ಅಗಲವಾಗಿದ್ದು ಮೇಲಕ್ಕೆ ಹೋಗುತ್ತ ಚೂಪಾಗುವುವೋ ಅದೇ ರೀತಿ ಅಧಿಕಾರದರ್ಜೆಯೂ ಇರಬೇಕು. ಪ್ರತಿ ಇಲಾಖೆಯಲ್ಲೂ ಅನೇಕ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಇಲಾಖೆಯಲ್ಲಿ ಕೆಳಗಿನಿಂದ ಮೇಲಿನವರೆಗೂ ಸರಪಳಿಯೋಪಾದಿಯಲ್ಲಿ ಅವರೆಲ್ಲ ಹೊಂದಿಕೊಂಡಿರುತ್ತಾರೆ. ಅವರ ದರ್ಜೆಗನುಗುಣವಾಗಿ ಅಧಿಕಾರಿಗಳು ಬೇರೆ ಬೇರೆ ಹಂತಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರುಗಳಿಗೆ ಕೆಳಗಿನ ಅಧಿಕಾರಿಗಳೂ ಮೇಲಿನ ಅಧಿಕಾರಿಗಳೂ ಇರುತ್ತಾರೆ. ಅವರೆಲ್ಲರ ಮೇಲೆ ಇಲಾಖಾಧಿಕಾರಿಗಳಿರುತ್ತಾರೆ. ಅಧಿಕಾರದರ್ಜೆಯಲ್ಲಿ ಮೇಲಧಿಕಾರಿ ತನ್ನ ಕೆಳ ಅಧಿಕಾರಿಗಳಿಗೆ ನಿರ್ದೇಶನ ಕೊಡುತ್ತಾನೆ. ಅವನು ತನ್ನ ಕೆಳಗಿನ ಅಧಿಕಾರಿಗಳಿಗೆ ಕರ್ತವ್ಯಗಳನ್ನು ಹಂಚಿ, ಅವುಗಳ ಉಸ್ತುವಾರಿಯನ್ನು ನೋಡುತ್ತಾನೆ. ಅವರೆಲ್ಲರ ಮೇಲ್ವಿಚಾರಣೆ ಮುಖ್ಯಾಧಿಕಾರಿಗೆ ಸೇರಿದ್ದು. ಆದ್ದರಿಂದ ಕೆಳ ಅಧಿಕಾರಿಗಳೆಲ್ಲ ಮುಖ್ಯಾಧಿಕಾರಿಗೆ ಜವಾಬ್ದಾರರು. ಈ ತತ್ತ್ವದ ಪ್ರಕಾರ ಅಧಿಕಾರ ಮೇಲಿನಿಂದ ಕೆಳಕ್ಕೂ ಮತ್ತು ಕೆಳಗಿನಿಂದ ಮೇಲಕ್ಕೂ ಹರಿಯುತ್ತಿರುತ್ತದೆ; ಕೆಳ ಅಧಿಕಾರಿಗಳು ಮೇಲಧಿಕಾರಿಗಳ ತೀರ್ಮಾನವನ್ನು ಒಪ್ಪಿಕೊಳ್ಳಲೇ ಬೇಕು. ಹಾಗೇನಾದರೂ ಒಪ್ಪಿಕೊಳ್ಳದಿದ್ದಲ್ಲಿ ಆಡಳಿತವ್ಯವಸ್ಥೆಯಲ್ಲಿ ಆಗಿಂದಾಗ್ಗೆ ಬಿಕ್ಕಟ್ಟುಗಳಿಗೆ ಅವಕಾಶವಾಗುತ್ತದೆ. ಆದ್ದರಿಂದ ಅಧಿಕಾರದರ್ಜೆ ಆಡಳಿತದಲ್ಲಿ ಕೆಲಸಗಳು ಇಮ್ಮಡಿಸದಂತೆಯೂ ಮೇಲುಸೇರುವೆಯಾಗದಂತೆಯೂ ಮತ್ತು ತೊಡಕೇಳದಂತೆಯೂ ಸಮರ್ಪಕವಾಗಿ ಕೆಲಸ ನೆರವೇರಲು ಸಹಕಾರಿಯಾಗುತ್ತದೆ.
	
ಅಧಿಕಾರದರ್ಜೆ ನಿಯಮದ ಪ್ರಕಾರ ಯಾವ ದರ್ಜೆಯನ್ನೂ ಬಿಟ್ಟು ಕೆಲಸ ಮಾಡುವಂತಿಲ್ಲ. ಕೆಳಗಿನಿಂದ ಕ್ರಮಬದ್ಧವಾಗಿ ಮೇಲ್ದರ್ಜೆಗೆ ಹೋಗಬೇಕೆಂಬ ನಿಯಮ ಶಾಸಕವಾಗಿಯೂ ಮತ್ತು ಪರಮಪ್ರಧಾನವಾಗಿಯೂ ಇದೆ. ಈ ನಿಯಮದಲ್ಲಿ ಈ ಅಂಶಗಳು ಮುಖ್ಯವಾದುವು: ಇಲಾಖೆಯ ಎಲ್ಲ ಸುದ್ದಿಗಳೂ ಕೆಳಮಟ್ಟದ ನೌಕರನಿಗೆ ಅಥವಾ ಅಧಿಕಾರಿಗೆ ಅವನಿಗೆ ಅತ್ಯಂತ ಹತ್ತಿರವಿರುವ ಮೇಲ್ದರ್ಜೆಯ ಅಧಿಕಾರಿಯಿಂದ ಬರತಕ್ಕದ್ದು; ಹಾಗೆ ಬಂದದ್ದು ಮೇಲಕ್ಕೂ ಹೊರಕ್ಕೂ ಹೋಗತಕ್ಕದ್ದು. ಈ ಕ್ರಮಾನುಸರಣೆಯಿಂದಲೇ ಸರಕಾರ ಅನೇಕ ವಿವಾದಾಂಶಗಳನ್ನು ವಿವೇಕದಿಂದ ತೀರ್ಮಾನಿಸಲು ಸಾಧ್ಯವಾಗುವುದು. ಅಲ್ಲದೆ ಅಧಿಕಾರಿಗಳು ಕೂಡ ತಮ್ಮ ಸಿಬ್ಬಂದಿಯ ಮೇಲೆ ಹತೋಟಿ ಇಟ್ಟುಕೊಂಡು ಕೆಲಸ ನಡೆಸಲು ಸಾಧ್ಯವಾಗುವುದು.
	
ಈ ನಿಯಮದಲ್ಲೂ ಕೆಲವು ಲೋಪದೋಷಗಳಿವೆ: ಕೆಲಸಕಾರ್ಯಗಳು ಆಗಬೇಕಾದರೆ ವಿಳಂಬವಾಗುತ್ತದೆ, ಕಟ್ಟುನಿಟ್ಟಾಗಿ ಪಾಲಿಸಿದರೆ ಜನರಿಗೆ ತೊಂದರೆಯೂ ಆಗುತ್ತದೆ. ಆದುದರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅಸಮರ್ಥ ಆಡಳಿತಕ್ಕೆ ಕಾರಣವಾಗುತ್ತದೆಂದು ಕೆಲವರ ಅಭಿಪ್ರಾಯ.					     
(ಎಂ.ಕೆ.ಆರ್.; ಕೆ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ